ಪ್ರೌಢಶಿಕ್ಷಣ

	ಪ್ರಾಥಮಿಕ ಅಥವಾ ಮೂಲಶಿಕ್ಷಣ (ಎಲಿಮೆಂಟರಿ) ಮುಗಿದ ಅನಂತರ ವಿಶ್ವವಿದ್ಯಾಲಯದ ಅಥವಾ ಉನ್ನತ ಶಿಕ್ಷಣದ ಆರಂಭದವರೆಗಿನ ಮಧ್ಯದ ಶಿಕ್ಷಣ ವ್ಯವಸ್ಥೆ (ಸೆಕೆಂಡರಿ ಎಜುಕೇಷನ್). ಇತ್ತೀಚಿನವರೆಗೂ ಪ್ರಾಥಮಿಕ ಶಾಲೆ ಮುಗಿಯುವ ಮತ್ತು ಪ್ರೌಢಶಾಲೆ ಆರಂಭವಾಗುವ ಕಾಲದ ಬಗ್ಗೆ ಖಚಿತ ಅಭಿಪ್ರಾಯವಿರಲಿಲ್ಲ. 1938ರಲ್ಲಿ ಇಂಗ್ಲೆಂಡಿನಲ್ಲಿ ರಚಿಸಲಾದ ಹ್ಯಾಡೊ ಸಮಿತಿ 13ನೆಯ ವರ್ಷದಿಂದ ಆರಂಭವಾಗುವ ಎಲ್ಲ ಬಗೆಯ ಶಿಕ್ಷಣವೂ ಪ್ರೌಢ ಶಿಕ್ಷಣವೆಂಬ ಅಭಿಪ್ರಾಯವನ್ನು ಸೂಚಿಸಿತು. ಅಂದಿನಿಂದ ಈ ಸೂತ್ರವನ್ನು ಅನುಸರಿಸಿ ಇವೆರಡು ಹಂತದ ಶಿಕ್ಷಣದ ವ್ಯವಸ್ಥೆ ಎಲ್ಲ ದೇಶಗಳಲ್ಲಿ ಅನುಷ್ಠಾನಕ್ಕೆ ಬರುತ್ತಿದೆ. ಈ ಹಂತ ಪ್ರಾಥಮಿಕ ಶಿಕ್ಷಣಕ್ಕೂ ಉನ್ನತ ಶಿಕ್ಷಣಕ್ಕೂ ಮಧ್ಯದ ಬಹುಮುಖ್ಯ ವ್ಯವಸ್ಥೆಯಾಗಿದ್ದು ಅದರ ಕಾರ್ಯಕ್ರಮಗಳ ಬಗ್ಗೆ ಈ ಶತಮಾನದ ಮಧ್ಯಕಾಲದ ವೇಳೆಗೆ ಶಿಕ್ಷಣವೇತ್ತರು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.

	ಇಂಗ್ಲೆಂಡಿನಲ್ಲಿ ಕೆಲವು ಪ್ರೌಢಶಾಲೆಗಳು ವಿದ್ಯಾರ್ಥಿಗಳಿಗೆ 7 ವರ್ಷಗಳ ಅವಧಿಯ ಪ್ರೌಢಶಿಕ್ಷಣವನ್ನು (7 ವಯಸ್ಸಿನಿಂದ 18 ವಯಸ್ಸಿನವರೆಗೆ) ನೀಡುತ್ತವೆ. ಮತ್ತೆ ಕೆಲವು ಪ್ರೌಢಶಾಲೆಗಳು 4 ವರ್ಷಗಳ ಅವಧಿಯ ಪ್ರೌಢಶಿಕ್ಷಣವನ್ನು (12 ಅಥವಾ 13 ವಯಸ್ಸಿನಿಂದ 16 ಅಥವಾ 17 ವಯಸ್ಸಿನವರೆಗೆ) ಮಾತ್ರ ಕೊಡುವಂತೆ ರೂಪಿತವಾಗಿರುತ್ತವೆ. ಇಂಥ ಶಾಲೆಗಳಲ್ಲಿ 4 ವರ್ಷಗಳ ಪ್ರೌಢಶಿಕ್ಷಣ ಹೊಂದಿದ್ದ ವಿದ್ಯಾರ್ಥಿಗಳು ತಮ್ಮ 16ನೆಯ ಅಥವಾ 18ನೆಯ ವಯಸ್ಸಿನಲ್ಲಿ ಹಿರಿಯ ವ್ಯಾಪಕ ಶಾಲೆಗಳಿಗೆ (ಸೀನಿಯರ್ ಕಾಂಪ್ರಿಹೆನ್‍ಸಿವ್ ಸ್ಕೂಲ್ಸ್) ಸೇರಿ 3 ವರ್ಷಗಳ ಅವಧಿಯಲ್ಲಿ ಉನ್ನತಮಟ್ಟದ ಪ್ರೌಢಶಿಕ್ಷಣ ಹೊಂದುವರು. ವಿಶೇಷ ಪರಿಶ್ರಮ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಗ್ಲ್ರಾಮರ್ ಹಾಗೂ ಸೆಕೆಂಡರಿ ಮಾಡರ್ನ್ ಶಾಲೆಗಳೂ ಇತರ ಪ್ರೌಢಶಿಕ್ಷಣದ ಶಾಲೆಗಳೂ ಪ್ರೌಢಶಿಕ್ಷಣ ಕೊಡುವುವು. ಕೆಲವು ಸೆಕೆಂಡರಿ ಶಾಲೆಗಳಲ್ಲಿ ಕೈಗಾರಿಕೆ ವಾಣಿಜ್ಯ ಮತ್ತು ಕೃಷಿಗೆ ಸಂಬಂಧಿಸಿದಂತೆ ಇರುವ ಪಠ್ಯವಿಷಯಗಳಲ್ಲಿ ಮಾತ್ರ ಸಾಮಾನ್ಯ ಶಿಕ್ಷಣವು ವಿದ್ಯಾರ್ಥಿಗಳಿಗೆ ದೊರೆಯುವುದು. ಮತ್ತೆ ಕೆಲವು ಪ್ರೌಢ ಶಾಲೆಗಳಲ್ಲಿ ಎರಡು ಅಥವಾ ಮೂರು ಬಗೆಯ ಪ್ರೌಢಶಿಕ್ಷಣಕ್ಕೆ ಸೌಲಭ್ಯವಿದೆ. ಇಂಥ ಶಾಲೆಗಳನ್ನು ಬೈಲ್ಯಾಟೆರಲ್ ಮತ್ತು ಮಲ್ಟಿಲ್ಯಾಟೆರಲ್ ಶಾಲೆಗಳೆಂದು ಕರೆಯುವರು.

	ಆಧುನಿಕ ಜನಜೀವನ ಹೆಚ್ಚು ಸಂಕೀರ್ಣವಾದಂತೆ ವ್ಯಕ್ತಿಗೆ ಪ್ರಾಥಮಿಕ ಶಿಕ್ಷಣ ಸಾಲದಾಗುತ್ತಿದೆ. ಆದ್ದರಿಂದ ಅನೇಕ ದೇಶಗಳಲ್ಲಿ ಕಡ್ಡಾಯ ಶಿಕ್ಷಣವನ್ನು 15-16ನೆಯ ವಯಸ್ಸಿನವರೆಗೆ ವಿಸ್ತರಿಸಿ ಪ್ರೌಢಶಿಕ್ಷಣವನ್ನು ಕಡ್ಡಾಯ ಮಾಡಲಾಗುತ್ತಿದೆ. ಈ ಹಂತದ ಶಿಕ್ಷಣ ಪೂರ್ಣವಾಗಿ ಸಾಮಾಜಿಕ ಅಥವಾ ಸಾಂಸ್ಕøತಿಕ ಶಿಕ್ಷಣವಾಗಬೇಕೆಂಬ ಅಭಿಪ್ರಾಯಕ್ಕೆ ಬೆಂಬಲ ದೊರೆತು ಹದಿನಾರು ವರ್ಷದವರೆಗಿನ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ ಐಚ್ಛಿಕ ಅಥವಾ ವೃತ್ತಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಂದರೆ ಪ್ರಾಥಮಿಕ ಶಾಲೆಯಲ್ಲಿ ಸಾಧಿಸಿದ ಮೂಲಭೂತ ಕೌಶಲ್ಯಗಳ ಉಪಕರಣ ರೂಪವಾದ ಸಿದ್ಧಿಯನ್ನು ಬಳಸಿಕೊಂಡು ಈ ಹಂತದಲ್ಲಿ ಹೆಚ್ಚಿನ ಜ್ಞಾನ ಕೌಶಲ್ಯ, ಅನುಭವ ಮುಂತಾದ ಜೀವನಾವಶ್ಯಕತೆಗಳ ಶಿಕ್ಷಣವನ್ನು ದೊರಕಿಸುವುದೆ ಮುಖ್ಯ ಉದ್ದೇಶವಾಗಿ ರೂಪುಗೊಳ್ಳುತ್ತಿದೆ. ಜೊತೆಗೆ ರಾಷ್ಟ್ರದ ಅಧಿಕೃತ ನೀತಿಯನ್ನನುಸರಿಸಿ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಪೋಷಿಸಿ ರಾಷ್ಟ್ರೀಯತೆಯ ಹಾಗೂ ಮಾನವೀಯತೆಯ ಪ್ರಜ್ಞೆಯನ್ನು ಬೆಳೆಸಬೇಕೆಂಬ ಅಭಿಪ್ರಾಯನ್ನು ಬಹುತೇಕ ದೇಶಗಳು ಅಂಗೀಕರಿಸಿವೆ. ಈ ಸಾಧನೆಗಾಗಿ ಮಾತೃಭಾಷೆ, ರಾಷ್ಟ್ರಭಾಷೆ (ಅಗತ್ಯವೆನಿಸಿದರೆ) ವ್ಯಾವಹಾರಿಕ ಅನ್ಯ ಭಾಷೆ, ಸಾಹಿತ್ಯ, ಇತಿಹಾಸ, ಗಣಿತ, ವಿಜ್ಞಾನ, ಪೌರನೀತಿ, ದೈಹಿಕ ಶಿಕ್ಷಣ, ಸಂಗೀತ ಮುಂತಾದವು ಪಠ್ಯವಿಷಯಗಳ ವ್ಯಾಸಂಗಕ್ರಮದಲ್ಲಿ ಸೇರುತ್ತವೆ. ಆದರೆ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಎಲ್ಲ ಹಂತದ ಶಾಲೆಗಳಲ್ಲೂ ಶ್ರಮಜೀವನಕ್ಕೆ ಪ್ರಾಶಸ್ತ್ಯವಿದ್ದು ಪ್ರೌಢಶಿಕ್ಷಣದಲ್ಲಿ ಅದು ವೃತ್ತಿ ಅಥವಾ ತಾಂತ್ರಿಕ ಸ್ವರೂಪವನ್ನು ತಾಳುತ್ತಿದೆ.

	ಸಮಾಜದಲ್ಲಿ ಕಂಡುಬರುವ ನೂರಾರು ವೃತ್ತಿಗಳಿಗೆ ಅನುಕೂಲವಾಗುವಂಥ ವೃತ್ತಿ ಪೂರ್ವಶಿಕ್ಷಣವನ್ನು ಈ ವಿದ್ಯಾರ್ಥಿಗಳು ಪಡೆಯಲು ಬೇಕಾದ ಸೌಕರ್ಯಗಳನ್ನು ಕೆಲವು ಕಾಲೇಜುಗಳು ಒದಗಿಸಿವೆ. ದಂತವೈದ್ಯದ ಸಹಾಯಕ, ವಕೀಲರ ಸಹಾಯಕ, ಜಾಹೀರಾತು ಮತ್ತು ಮಾರಾಟದ ಶಿಕ್ಷಣ, ಪ್ರಯೋಗಶಾಲೆಗಳ ಸಹಾಯಕ, ತೋಟಗಾರಿಕೆ ಮತ್ತು ವನಸಂರಕ್ಷಣೆಯಲ್ಲಿ ಶಿಕ್ಷಣ, ವೈಜ್ಞಾನಿಕ ವ್ಯವಸಾಯ, ಹೈನುಗಾರಿಕೆ, ಎಣ್ಣೆ ಮತ್ತು ಸಾಬೂನು ತಯಾರಿಕೆ, ಗಡಿಯಾರಗಳನ್ನು ಸಿದ್ಧಪಡಿಸುವುದು, ಮರದಲ್ಲಿ ಕೆತ್ತನೆ ಕೆಲಸ, ಸಕ್ಕರೆ ತಯಾರಿಕೆ, ಗಣಿಯಲ್ಲಿ ಸಹಾಯಕ, ಪಶುಪಾಲನೆ, ರೇಷ್ಮೆ ತಯಾರಿಕೆ, ಕೋಳಿಸಾಕಣೆ, ಮೀನುಗಾರಿಕೆ ಮುಂತಾದ ವೃತ್ತಿಗಳಿಗೆ ಉಪಯೋಗವಾಗುವಂಥ ಮೂಲಭೂತ ವಿಷಯಗಳನ್ನು ತಾತ್ತ್ವಿಕವಾಗಿಯೂ ಅನುಭವಗಳ ಮೂಲಕವೂ ವಿದ್ಯಾರ್ಥಿಗಳಿಗೆ ತಿಳಿಸುವುದರಿಂದ ಈ ಎರಡು ವರ್ಷಗಳ ಉನ್ನತ ಪ್ರೌಢಶಿಕ್ಷಣದ ಅನಂತರ ಅವರು ತಾವು ಶಿಕ್ಷಣ ಪಡೆದ ವೃತ್ತಿಗಳನ್ನು ನೇರವಾಗಿ ಅವಲಂಬಿಸಲು ಅನುಕೂಲವಾಗುವುದು. ಸಾಮಥ್ರ್ಯವಿರುವ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣವನ್ನು ಪದವಿ ಕಾಲೇಜುಗಳಲ್ಲೂ ವೈದ್ಯಕೀಯ ಕಾಲೇಜುಗಳಲ್ಲೂ ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಮುಂದುವರಿಸಲು ರಾಜ್ಯಸರ್ಕಾರ ವ್ಯವಸ್ಥೆ ಮಾಡಿರುವುದು.

ಪ್ರೌಢಶಿಕ್ಷಣವನ್ನು ಎರಡು ಹಂತಗಳಲ್ಲಿ ವ್ಯವಸ್ಥೆಗೊಳಿಸಲಾಗುತ್ತಿದೆ. 3-4 ವರ್ಷದ ಕಿರಿಯ ಪ್ರೌಢಶಾಲೆ, 2 ವರ್ಷದ ಹಿರಿಯ ಪ್ರೌಢಶಾಲೆ, ಕಿರಿಯ ಪ್ರೌಢಶಾಲೆಯಲ್ಲಿ ಪೂರ್ಣವಾಗಿ ಸಾಮಾನ್ಯ ಶಿಕ್ಷಣ ಕೊಡಲಾಗುತ್ತದೆ. ಈ ಹಂತದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಹಿರಿಯ ಪ್ರೌಢಶಾಲೆಗೆ ಪ್ರವೇಶ ಪಡೆಯುತ್ತಾರೆ. ಇಲ್ಲಿ ಭಾಷೆಗಳ ಜೊತೆಗೆ ಐಚ್ಛಿಕ ವಿಷಯಗಳು ಪ್ರಾಧಾನ್ಯ ಪಡೆಯುತ್ತವೆ. ನೇರವಾಗಿ ಸಾಮಾನ್ಯ ಪದವಿ ಶಿಕ್ಷಣಕ್ಕೆ ಹೋಗತಕ್ಕವರಿಗೆ, ಎಂಜಿನಿಯರಿಂಗ್, ವೈದ್ಯ, ವಾಣಿಜ್ಯ, ಮುಂತಾದ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಹೋಗತಕ್ಕವರಿಗೆ ಅನುಕೂಲವಾಗುವ ರೀತಿಯಲ್ಲಿ 3-4 ಐಚ್ಛಿಕ ವಿಷಯಗಳನ್ನು ಅಳವಡಿಸಿರುತ್ತಾರೆ. ಯಾವುದೇ ರೀತಿಯ ಉನ್ನತ ಶಿಕ್ಷಣಕ್ಕೆ ಹೋಗತಕ್ಕವರು ಈ ಹಂತದ ಕೊನೆಯಲ್ಲಿ ನಡೆಯುವ ಪಿ.ಯು.ಸಿ. ಜೂನಿಯರ್ ಹೈಯರ್ ಸೆಕೆಂಡರಿ ಅಥವಾ ಇಂಟರ್‍ಮೀಡಿಯೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅಂಥವರು ತಾವು ಆಯ್ದುಕೊಂಡಿರುವ ಐಚ್ಛಿಕ ವಿಷಯಗಳಿಗನುಗುಣವಾದ ಪದವಿ ತರಗತಿಗೆ ಸೇರಬಹುದು.

	ಪ್ರೌಢಶಾಲೆಗೆ ಪ್ರವೇಶ ಬಯಸತಕ್ಕವರು 6 ಅಥವಾ 7 ವರ್ಷದ ಪ್ರಾಥಮಿಕ ಶಿಕ್ಷಣ ಮುಗಿಸಿರಬೇಕು. ಈ ಹಂತದ ಅಂತ್ಯದಲ್ಲಿ ನಡೆಯುವ ಪರೀಕ್ಷೆಯೊಂದರಲ್ಲಿ ಉತ್ತೀರ್ಣರಾಗುವುದೂ ಕೆಲವು ದೇಶಗಳಲ್ಲಿ ಕಡ್ಡಾಯವಾಗಿದೆ. ಆದರೆ ಸಾರ್ವತ್ರಿಕ ಪರೀಕ್ಷೆಗೆ ಬದಲು ಶಾಲಾ ಮಟ್ಟದ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಕೆಂಬ ಅಭಿಪ್ರಾಯಕ್ಕೆ ಬೆಂಬಲ ದೊರಕುತ್ತಿದೆ. ಕೆಲವು ದೇಶಗಳಲ್ಲಿ 11 ವಯಸ್ಸಿನಲ್ಲಿ ಒಂದು ಸಾರ್ವತ್ರಿಕ ಪರೀಕ್ಷೆ ನಡೆಸಿ ಅದರ ಫಲಿತಾಂಶವನ್ನು ಆಧಾರ ಮಾಡಿಕೊಂಡು ವಿದ್ಯಾರ್ಥಿಗಳನ್ನು ಅವರವರ ಶಕ್ತಿಸಾಮಥ್ರ್ಯಗಳಿಗೆ ಅನುಗುಣವಾದ ಪ್ರೌಢಶಾಲೆಗೆ ಸೇರಿಸುವ ವ್ಯವಸ್ಥೆ ಆಚರಣೆಯಲ್ಲಿದೆ. ಇದರಿಂದ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಮೂರು ರೀತಿಯ ಪ್ರೌಢಶಾಲೆಗಳು ಅಸ್ತಿತ್ವಕ್ಕೆ ಬಂದಿವೆ. ಮುಂದೆ ಉನ್ನತ ಸೈದ್ಧಾಂತಿಕ ವಿದ್ವತ್‍ಪೂರ್ಣ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಗ್ರ್ಯಾಮರ್ ಪ್ರೌಢಶಾಲೆಗಳೂ ಅಷ್ಟು ಪ್ರತಿಭಾವಂತರಲ್ಲದ ಸಾಮಾನ್ಯ ವಿದ್ಯಾರ್ಥಿಗಳಿಗೆ ಕೇವಲ ಕಡ್ಡಾಯ ಶಿಕ್ಷಣ ಮುಗಿಸಲೋಸುಗ ಮಾಡರ್ನ್ ಪ್ರೌಢಶಾಲೆಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಭಾರತದಂಥ ದೇಶಗಳಲ್ಲಿ ಹಿರಿಯ ಪ್ರೌಢಶಾಲೆ ಸಾಮಾನ್ಯ ಸಾಂಸ್ಕøತಿಕ ಶಿಕ್ಷಣಕ್ಕೆ ಮೀಸಲಾಗಬೇಕೆಂಬ ತತ್ತ್ವದ ಮೇಲೆ ಈ ವೈವಿಧ್ಯವನ್ನು ಅಂಗೀಕರಿಸಿಲ್ಲ. ಅದನ್ನು ಹಿರಿಯ ಪ್ರೌಢಶಾಲೆಗೆ ವರ್ಗಾಯಿಸಲಾಗಿದೆ.

	ಪ್ರೌಢಶಿಕ್ಷಣ ರಾಷ್ಟ್ರದ ಶಿಕ್ಷಣ ವ್ಯವಸ್ಥೆಯ ಬಹುಮುಖ್ಯ ಅಂಗವಾಗಿದ್ದು ಈ ಶತಮಾನದ ಮಧ್ಯದ ತಿರುವಿನಿಂದ ಅಗಾಧವಾಗಿ ವಿಸ್ತರಿಸುತ್ತ ಬಂದಿದೆ. ಕೇವಲ ಪ್ರಾಥಮಿಕ ಶಾಲೆಯಲ್ಲಿ ಅನೇಕ ಸ್ಥಳಗಳಲ್ಲಿ ಜೂನಿಯರ್ ಪ್ರೌಢಶಾಲೆಗಳು ಅಸ್ತಿತ್ವಕ್ಕೆ ಬಂದಿವೆ. ಪ್ರಾಥಮಿಕ ಶಿಕ್ಷಣವನ್ನು ಬಿಟ್ಟರೆ ರಾಷ್ಟ್ರದ ಆಯವ್ಯಯದಲ್ಲಿ ಬಹುಪಾಲು ಈ ಹಂತಕ್ಕಾಗಿ ವೆಚ್ಚವಾಗುತ್ತಿದೆ. ಈ ದೊಡ್ಡ ಹೊರೆಯನ್ನು ಅಲ್ಪವಾಗಿಯೊ ಬಹುಮಟ್ಟಿಗೊ ಸ್ಥಳೀಯ ಸರ್ಕಾರಗಳು, ಖಾಸಗಿ ಸಂಸ್ಥೆಗಳು ವಹಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಆದರೂ ಅ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಅವುಗಳ ವೆಚ್ಚದ ಬಹುಭಾಗವನ್ನೊ ಪೂರ್ಣಭಾಗವನ್ನೊ ಅನುದಾನವನ್ನಾಗಿ ಕೊಡುತ್ತಿದೆ. ಸಾಮಾನ್ಯವಾಗಿ ಕಿರಿಯ ಪ್ರೌಢಶಾಲೆಯ ಆಡಳಿತ ರಾಜ್ಯದ ಶಿಕ್ಷಣ ಶಾಖೆಗೂ ಹಿರಿಯ ಪ್ರೌಢಶಾಲೆಯ ಅಡಳಿತ ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನೊಳಗೊಂಡ ಮಂಡಲಿಯೊಂದಕ್ಕೂ ಸೇರಿರುತ್ತದೆ. ಅವೆರಡರ ಆಡಳಿತವನ್ನು ಸರ್ಕಾರದಿಂದ ನೇಮಕವಾದ ನಿರ್ದೇಶನಾಧಿಕಾರಿಗಳು ನಡೆಸುತ್ತಾರೆ. ರಾಜ್ಯಸರ್ಕಾರದ ಅಧಿಕೃತ ನೀತಿಯಂತೆ ಮಂಡಲಿಯ ಸಲಹೆಗಳನ್ನನುಸರಿಸಿ ಅವರು ಕಾರ್ಯನಿರ್ವಹಿಸುತ್ತಾರೆ. ಅವರ ಸಹಾಯಕ್ಕೆ ರಾಜ್ಯಸರ್ಕಾರದ ಪ್ರೌಢಶಾಲೆಗಳಂತೆ ರಾಷ್ಟ್ರೀಯ ಅಥವಾ ಕೇಂದ್ರ ಸರ್ಕಾರವೂ ದೇಶಾದ್ಯಂತ ಕೇಂದ್ರೀಯ ಅಥವಾ ರಕ್ಷಣಾ ಇಲಾಖೆ ಪ್ರೌಢಶಾಲೆಗಳನ್ನು ಆರಂಭಿಸಿವೆ. ಅವುಗಳ ಆಡಳಿತ ಮತ್ತು ವೆಚ್ಚ ಕೇಂದ್ರ ಸರ್ಕಾರದ ಆಯಾ ಇಲಾಖೆಗೆ ಅಥವಾ ಅದರಿಂದ ನೇಮಕವಾದ ಸ್ವಯಮಾಡಳಿತ ಸಂಸ್ಥೆಗೆ ಸೇರುತ್ತದೆ.

	ಕಿರಿಯ ಪ್ರೌಢಶಾಲೆಯ ಅಂತ್ಯದಲ್ಲಿ ನಡೆಯುವ ಎಸ್.ಎಸ್.ಎಲ್.ಸಿ, ಅಥವಾ ಎಸ್.ಎಸ್.ಸಿ. ಪರೀಕ್ಷೆಯನ್ನು ರಾಜ್ಯಸರ್ಕಾರ ನೇಮಿಸುವ ಪರೀಕ್ಷಾಮಂಡಲಿಯೊಂದು ನಡೆಸುತ್ತದೆ. ಉತ್ತೀರ್ಣರಾದವರಿಗೆ ಡಿಪ್ಲೊಮಾ ಸರ್ಟಿಫಿಕೇಟ್ ಕೊಡುತ್ತಾರೆ. ಈ ಅರ್ಹತಾಪತ್ರ ನಾಲ್ಕನೆಯ ದರ್ಜೆಯ ನೌಕರರನ್ನುಳಿದು ಮಿಕ್ಕ ಎಲ್ಲಾ ಸರ್ಕಾರಿ ನೌಕರರಿಗೂ ಆಗತ್ಯ ಶಿಕ್ಷಣಾರ್ಹತೆ ಎನಿಸುತ್ತದೆ. ಹಿರಿಯ ಪ್ರೌಢಶಾಲೆ ಅಥವಾ ಜೂನಿಯರ್ ಕಾಲೇಜಿನ ಎರಡು ವರ್ಷದ ಶಿಕ್ಷಣದ ಅನಂತರ ಪಿ.ಯು.ಸಿ. ಬೋರ್ಡ್ ಮುಂತಾದ ಹೆಸರುಗಳಿಂದ ಅನುಷ್ಠಾನದಲ್ಲಿರುವ ಆಡಳಿತ ಶಿಕ್ಷಣಕ್ಕೆ ಅರ್ಹತೆಯನ್ನು ದೊರಕಿಸುವ ಡಿಪ್ಲೊಮಾ ಸರ್ಟಿಫಿಕೇಟನ್ನು ನೀಡುತ್ತದೆ. ಈಚೆಗೆ ಈ ಎರಡು ಹಂತಗಳಲ್ಲೂ ಭಾಷೆಗಳು ಮತ್ತು ಇತರ ವಿಷಯಗಳಲ್ಲಿ ಯಾವುದರಲ್ಲಿ ಉತ್ತೀರ್ಣರಾಗಿರುವರೊ ಅದಕ್ಕೆ ಮಾತ್ರ ಅರ್ಹತಾಪತ್ರವನ್ನು ನೀಡುವ ವ್ಯವಸ್ಥೆ ಆಚರಣೆಗೆ ಬರುತ್ತಿದೆ.

	ಪ್ರೌಢಶಿಕ್ಷಣ ಮಟ್ಟದ ಇತರ ಸಂಸ್ಥೆಗಳು: ಪ್ರಾಥಮಿಕ ಶಿಕ್ಷಣ ಮುಗಿಸಿದವರು ಅಥವಾ ಕಿರಿಯ ಪ್ರೌಢಶಾಲೆಯಲ್ಲಿ ಉತ್ತೀರ್ಣರಾದವರು ಕೈಗಾರಿಕಾ ಶಾಲೆ, ಪಾಲಿಟೆಕ್ನಿಕ್ ಮುಂತಾದವುಗಳಲ್ಲಿ ವೃತ್ತಿ ಅಥವಾ ತಾಂತ್ರಿಕ ಶಿಕ್ಷಣವನ್ನು ಪಡೆಯುತ್ತಾರೆ. ಅ ಶಿಕ್ಷಣವೂ ಪ್ರೌಢಶಿಕ್ಷಣದ ಮಟ್ಟಕ್ಕೇ ಸೇರುತ್ತದೆ. ಅಂಥ ವೃತ್ತಿಗಳಲ್ಲಿ ಎಂಜಿನಿಯರಿಂಗ್, ತಂತ್ರಶಾಸ್ತ್ರ, ಉಪಚಾರಿಕೆ, ಮೀನುಗಾರಿಕೆ, ಛಾಯಚಿತ್ರಣ, ಹೈನುಗಾರಿಕೆ, ಸಂಗೀತ, ಹೊಲಿಗೆ, ಕಸೂತಿ, ಬೆರಳಚ್ಚು ಮತ್ತು ಶೀಘ್ರಲಿಪಿ, ಮುದ್ರಣ, ಕೋಳಿಸಾಕಣೆ ಮುಂತಾದವು ಈ ಹಂತದಲ್ಲಿ ಆಯಾ ವೃತ್ತಿಗೆ ಪೂರ್ಣಸಿದ್ಧತೆಯನ್ನು ಒದಗಿಸುತ್ತವೆ.
(ಎಸ್.ಎಸ್.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ